ಎಡ್ವರ್ಡ್
	ಇಂಗ್ಲೆಂಡಿನ ಇತಿಹಾಸದಲ್ಲಿ ಈ ಹೆಸರಿನ ರಾಜರು ಒಟ್ಟು ಹನ್ನೊಂದು ಮಂದಿ: ನಾರ್ಮನ್ನರ ಆಕ್ರಮಣಕ್ಕೆ ಮೊದಲು ಮೂವರು; ಅನಂತರ ಎಂಟು ಜನ. ಇವರ ಪರಿಚಯಗಳನ್ನು ಮುಂದೆ ಕೊಟ್ಟಿದೆ.

ಎಡ್ವರ್ಡ್ ದಿ ಎಲ್ಡರ್ : ಈತನು 899-924ರಲ್ಲಿ ಇಂಗ್ಲೆಂಡಿನ ದೊರೆಯಾಗಿದ್ದ. ಇವನ ತಂದೆ ಆಲ್ಫ್ರೆಡ್. ತಂದೆಯೊಂದಿಗೆ ಜಂಟಿಯಾಗಿ ಈತ ರಾಜ್ಯವಾಳಿದ. ಡೇನರೊಂದಿಗೆ ನಡೆದ ಯುದ್ಧದಲ್ಲಿ ಈತನ ಪಾತ್ರ ಹಿರಿದು. ಕ್ರಮೇಣ ಈತ ಹಂಬರ್ ನದಿಗೆ ದಕ್ಷಿಣದ ಇಡೀ ಪ್ರದೇಶದ ದೊರೆಯಾದ. ಹೊರಗಿನ ಶತ್ರುಗಳಿಂದ ಇಂಗ್ಲೆಂಡನ್ನು ರಕ್ಷಿಸಲು ಬಹಳವಾಗಿ ಪ್ರಯತ್ನಿಸಿದ. ಇವನೊಬ್ಬ ದಕ್ಷ ಸೇನಾನಾಯಕ; ಆಡಳಿತ ವಿಚಾರದಲ್ಲೂ ಸಮರ್ಥ. ಇಂಗ್ಲಿಷ್ ಚರ್ಚಿನ ಸಂಘಟನೆಯ ಕೆಲಸ ಇವನ ಕಾಲದಲ್ಲಿ ಮುಂದುವರಿಯಿತು. ನಾಣ್ಯಮುದ್ರಣ, ನ್ಯಾಯಪದ್ಧತಿ, ಸ್ಥಳೀಯ ಆಡಳಿತ- ಮುಂತಾದ ನಾನಾ ಕ್ಷೇತ್ರಗಳಲ್ಲಿ ತಕ್ಕಮಟ್ಟಿನ ಸುಧಾರಣೆ ತಂದವನು ಇವನೇ.

ಎಡ್ವರ್ಡ್ ದಿ ಮಾರ್ಟರ್: 	975 ರಿಂದ 978ರ ವರೆಗೆ ಇಂಗ್ಲಿಷರ ದೊರೆ. ಈತ ಎಡ್ಗರನ ಮೊದಲನೆಯ ಹೆಂಡತಿಯ ಮಗ. ತಂದೆ ಸತ್ತಾಗ ಈತ ದೊರೆಯಾಗಬೇಕೆಂದು ಒಂದು ಪಕ್ಷವೂ ಇವನ ಮಲತಮ್ಮ ದೊರೆಯಾಗಬೇಕೆಂದು ಇನ್ನೊಂದು ಪಕ್ಷವೂ ಬಯಸಿದುವು. ಕೊನೆಗೆ ಈತನೇ ದೊರೆಯೆಂದು ಚುನಾಯಿತನಾದ.

	ಇವನ ಕಿರು ಆಳ್ವಿಕೆಯ ಕಾಲದಲ್ಲಿ ನಾಡಿನಲ್ಲಿ ಬಹಳ ಅಶಾಂತಿಯಿತ್ತು. ಪ್ರತಿಗಾಮಿ ಪ್ರವೃತ್ತಿಗಳು ತಲೆಯೆತ್ತಿದ್ದವು. 978ರಲ್ಲಿ ಈತ ಕೊಲೆಗೆ ಈಡಾದ. ಯಾವ ಮರ್ಯಾದೆಯೂ ಇಲ್ಲದೆ ಇವನ ಶವವನ್ನು ಹೂಳಿಟ್ಟರು. ಆದರೆ ಒಂದು ವರ್ಷದ ಅನಂತರ ಈತನ ದೇಹದ ಉಳಿಕೆಗಳನ್ನು ಸಕಲ ಮರ್ಯಾದೆಗಳೊಡನೆ ಷಾಫ್ಟ್ಸ್‍ಬರಿಗೆ ವರ್ಗಾಯಿಸಲಾಯಿತು. ಅಲ್ಲಿ ಕೆಲವು ಪವಾಡಗಳು ಸಂಭವಿಸಿದುವೆಂದು ಪ್ರತೀತಿಯುಂಟು. ಇವನನ್ನು ಈತನ ಮಲತಾಯಿಯೇ ಕೊಲ್ಲಿಸಿದಳೆಂದು ನೂರುವರ್ಷದ ಅನಂತರ ಹುಟ್ಟಿಕೊಂಡ ದಂತಕತೆಗಳಿಗೆ ಆಧಾರ ದೊರಕಿಲ್ಲ. ಇವನನ್ನೂ ಒಬ್ಬ ಸಂತನೆಂದು ಪರಿಗಣಿಸಲಾಗಿದೆ.
ಎಡ್ವರ್ಡ್ ದಿ ಕನ್‍ಫೆಸರ್ :	1003-1066. ಇಂಗ್ಲಿಷರ ದೊರೆ. ಜನನ ಆಕ್ಸ್‍ಫರ್ಡ್‍ಪೈರಿನ ಎಸ್ಲಿಷ್‍ನಲ್ಲಿ. ತಂದೆ ಆಥೆಲ್‍ರೇಡ್. ಈತ ಬಾಲ್ಯವನ್ನು ಕಳೆದದ್ದು ಫ್ರಾನ್ಸಿನಲ್ಲಿ. ಇಂಗ್ಲೆಂಡಿಗೆ ಹಿಂದಿರುಗಿ ತನ್ನ ಮಲಸೋದರನ ಅನಂತರ ಪಟ್ಟಕ್ಕೆ ಬಂದ (1042). ಈತ ರಾಜ್ಯವನ್ನು ಚೆನ್ನಾಗಿ ಆಳಿದ. ಇವನ ಕಾಲದಲ್ಲಿ ಪ್ರಜೆಗಳ ತೆರಿಗೆಯ ಭಾರ ಇಳಿಯಿತು. ನಾರ್ಮನ್ ಜನರ ಬಗ್ಗೆ ಎಡ್ವರ್ಡ್ ಪಕ್ಷಪಾತಿಯಾಗಿದ್ದನೆಂಬ ಕಾರಣದಿಂದ ಇಂಗ್ಲೆಂಡಿನ ಬಲಿಷ್ಠ ಶ್ರೀಮಂತ ಅರ್ಲ್ ಗಾಡ್‍ವಿನ್ ಈತನನ್ನು ಎದುರಿಸಿದ. ಎಡ್ವರ್ಡ್ ಜಗ್ಗಲಿಲ್ಲ. ಅರ್ಲನಿಗೂ ಆತನ ಸಂಸಾರಕ್ಕೂ ಗಡೀಪಾರಾಯಿತು. ಆದರೆ ಅವರು ಸ್ವಲ್ಪಕಾಲಾನಂತರ ಇಂಗ್ಲೆಂಡಿಗೆ ಮರಳಿದರು. ಈ ನಡುವೆ ನಾರ್ಮಂಡಿಯ ಡ್ಯೂಕ್‍ನಲ್ಲಿ ಎಡ್ವರ್ಡ್‍ನಿಗೆ ಅಭಿಮಾನ ಬೆಳೆದಿತ್ತು. ಡ್ಯೂಕನನ್ನೆ ತನ್ನ ಉತ್ತರಾಧಿಕಾರಿಯನ್ನಾಗಿ ಮಾಡುವುದಾಗಿ ಎಡ್ವರ್ಡ್ ಆತನಿಗೆ ವಚನವಿತ್ತಿದ್ದ. ಆದರೆ ಇಂಗ್ಲೆಂಡಿನ ಸಿಂಹಾಸನಕ್ಕಾಗಿ ಅವನೊಂದಿಗೆ ನಾರ್ವೆಯ ಮೂರನೆಯ ಹ್ಯಾರಲ್ಡನೂ ಸ್ಫರ್ಧಿಸಿದ್ದ. ಅಷ್ಟರಲ್ಲಿ ಎಡ್ವರ್ಡನ ಮರಣ ಸನ್ನಿಹಿತವಾಯಿತು. ಸಾಯುವ ಮುನ್ನ ಈತ ಗಾಡ್ವಿನನ ಯೋಧಪುತ್ರ ಹ್ಯಾರಲ್ಡನನ್ನು ಉತ್ತರಾಧಿಕಾರಿಯೆಂದು ನೇಮಿಸಿದ. ಈತನ ಒಳ್ಳೆಯತನದಿಂದಾಗಿ ಇವನನ್ನು ಎಡ್ವರ್ಡ್ ದಿ ಕನ್‍ಫೆಸರ್ ಎಂದು ಕರೆಯುತ್ತಾರೆ. 1161ರಲ್ಲಿ ಈತನನ್ನು ಕ್ರೈಸ್ತ ಸಂತರ ಪಟ್ಟಿಗೆ ವಿಧಿಪೂರ್ವಕವಾಗಿ ಸೇರಿಸಲಾಯಿತು.					 *

ಎಡ್ವರ್ಡ್ I :	1239-1307. ಇಂಗ್ಲೆಂಡಿನ ದೊರೆ. ಮೂರನೆಯ ಹೆನ್ರಿಯ ಹಿರಿಯ ಮಗನಾಗಿ ವೆಸ್ಟ್‍ಮಿನ್ಸ್‍ಟರಿನಲ್ಲಿ ಹುಟ್ಟಿದ. 1272 ರಿಂದ 1307ರ ವರೆಗೂ ಆಳಿದ ಇವನಿಗೆ ಇಂಗ್ಲೆಂಡಿನ ಇತಿಹಾಸದಲ್ಲಿ ಪ್ರಮುಖ ಸ್ಥಾನವಿದೆ. ಇವನ ಕೆಲವು ಕಾನೂನು ಪ್ರಭಾವವನ್ನು ಇಂದಿಗೂ ಇಂಗ್ಲಿಷರ ಜನಜೀವನದಲ್ಲಿ ಗುರುತಿಸಬಹುದು. ಎಡ್ವರ್ಡ್ ಆಡಳಿತಕ್ಕೆ ಬಂದಾಗ ರಾಜ್ಯದಲ್ಲಿ ಅಂತರ್ಯುದ್ಧ ನಡೆದಿದ್ದು ರಾಜಪ್ರಭುತ್ವದ ಗೌರವ ಕುಂದಿತ್ತು. ಅಂಥ ಸಂದರ್ಭದಲ್ಲಿ ಈತ ಶೌರ್ಯ ಸ್ಥೈರ್ಯ ದಕ್ಷತೆಗಳಿಂದ ವಿರೋಧ ಶಕ್ತಿಗಳನ್ನು ಅಡಗಿಸಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡ. ನ್ಯಾಯಾಡಳಿತ ಪದ್ಧತಿಯಲ್ಲಿದ್ದ ದೋಷಗಳನ್ನು ನಿವಾರಿಸಲು ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಇವನ ನ್ಯಾಯಪದ್ಧತಿಯ ಶ್ರೇಷ್ಠತೆಯಿಂದ ಇವನನ್ನು ಇಂಗ್ಲೆಂಡಿನ ಜಸ್ಟಿನಿಯನ್ ಎಂದು ಕರೆಯುತ್ತಾರೆ. ಈತ ಪ್ರಸಿದ್ಧ ಯೋಧನೂ ಆಗಿದ್ದ. ಆಗ ಕ್ರೈಸ್ತನಿಗೂ ಮುಸ್ಲಿಮರಿಗೂ ನಡೆಯುತ್ತಿದ್ದ ಧರ್ಮಯುದ್ಧಗಳಲ್ಲಿ ಭಾಗವಹಿಸಿ ಪರಾಕ್ರಮ ಮೆರೆದ. ಬ್ರಿಟನ್ನಿನ ಐಕ್ಯ ಸಾಧಿಸಲು ಯತ್ನಿಸಿದವರಲ್ಲಿ ಎಡ್ವರ್ಡ್ ಮೊದಲನೆಯವನೆಂದು ಹೇಳಬಹುದು. ಸ್ಕಾಟ್‍ಲೆಂಡ್ ಮತ್ತು ವೇಲ್ಸ್ ಯುದ್ಧಗಳಲ್ಲಿ ಅದ್ಭುತ ವಿಜಯಗಳಿಸಿದ. ಆದರೆ ಸ್ವಾತಂತ್ರ್ಯಪ್ರಿಯರಾಗಿದ್ದ ಸ್ಕಾಟರು ಅನಂತರ ದಂಗೆಯೆದ್ದರು. ಈತ ಮಾಡಲ್ ಪಾರ್ಲಿಮೆಂಟ್ ಕೂಡಿಸಿ ಪ್ರಜೆಗಳ ಹಕ್ಕುಗಳಿಗೆ ಮನ್ನಣೆ ಕೊಟ್ಟ. ಈತ ತನ್ನ ಎಪ್ಪತ್ತನೆಯ ವಯಸ್ಸಿನಲ್ಲಿ ಯುದ್ಧಗಳಲ್ಲಿ ಮಡಿದ. ಮಧ್ಯಯುಗದ ಅರಸರಲ್ಲೆಲ್ಲ ಈ ಎಡ್ವರ್ಡ್ ಶ್ರೇಷ್ಠನೆಂದು ಪರಿಗಣಿಸಲಾಗಿದೆ.

ಎಡ್ವರ್ಡ್ II :	1284-1327. ಇಂಗ್ಲೆಂಡಿನ ದೊರೆ. ಮೊದಲನೆಯ ಎಡ್ವರ್ಡನ ನಾಲ್ಕನೆಯ ಮಗ. ಅಣ್ಣ ಆಲ್ಫಾನ್ಸೊ 1284ರಲ್ಲಿ ಅಕಾಲ ಮರಣಕ್ಕೆ ತುತ್ತಾದಾಗ ಈತ ಪಟ್ಟಕ್ಕೆ ಬಂದ. ಒಡನೆಯೇ ಎಡ್ವರ್ಡ್ ತನ್ನ ತಂದೆಯ ವಿರೋಧಿಗಳೊಂದಿಗೆ ಸಖ್ಯ ಬೆಳೆಸಿದ. ದೇಶಭ್ರಷ್ಠನಾಗಿದ್ದ ಗ್ಯಾವೆಸ್ಟನನನ್ನು ಕರೆಸಿಕೊಂಡು ಅವನಿಗೆ ಅರ್ಲ್ ಪದವಿ ಕೊಟ್ಟ. ಇವನ ಎರಡು ದಶಕಗಳ ಆಳ್ವಿಕೆಯಲ್ಲಿ ಬ್ಯಾರನ್ನುಗಳಿಗೂ (ಶ್ರೀಮಂತರು) ಇವನಿಗೂ ತಿಕ್ಕಾಟ ಹೆಚ್ಚಿತು. ಪಾರ್ಲಿಮೆಂಟು ಪ್ರಬಲವಾಯಿತು. ಎಡ್ವರ್ಡನಿಗೆ ದೇಹಬಲವಿತ್ತಾದರೂ ಈತ ಬುದ್ಧಿವಂತನಲ್ಲ; ರಾಜತ್ವದ ಠೇಂಕಾರವನ್ನು ಅರಿತವನಲ್ಲ. ಮಿತ್ರರ ಮಾತಿಗೆ ಕಿವಿಗೊಡುತ್ತಿದ್ದ. ಶ್ರೀಮಂತರು ಈತನನ್ನು ಮೂಲೆಗೊತ್ತಿ ತಾವೇ ಆಡಳಿತ ನಡೆಸಲಾರಂಭಿಸಿದರು. ಈತನ ರಾಣಿಯೇ ಇವನ ವಿರುದ್ಧ ಪಿತೂರಿ ನಡೆಸಿ ಇವನನ್ನು ಕೊಲ್ಲಿಸಿದಳು.

ಎಡ್ವರ್ಡ್ III :	1312-1377. ಎರಡನೆಯ ಎಡ್ವರ್ಡನಿಗೆ ಫ್ರಾನ್ಸಿನ ಇಸಬೆಲಳಲ್ಲಿ ಹುಟ್ಟಿದ ಈತ 1327ರಲ್ಲಿ ಇಂಗ್ಲೆಂಡಿನ ದೊರೆಯಾದ. ಈತ ಸಾಹಸಿ, ಶೂರ. ಚೆಸ್ಟರಿನ ಆರ್ಲನೆಂದು 1320ರಲ್ಲಿ ಪಾರ್ಲಿಮೆಂಟಿಗೆ ಆಹ್ವಾನಿತನಾಗಿ 1325ರಲ್ಲಿ ಡ್ಯೂಕ್ ಆದ. ಮುಂದೆ ಇವನ ತಂದೆ ರಾಜಿನಾಮೆ ಕೊಡಬೇಕಾಗಿ ಬಂದಾಗ ಈತನಿಗೆ ಪಟ್ಟ ಬಂತು. ಇವನ ಹೆಸರಿನಲ್ಲಿ ಈತನ ತಾಯಿಯೂ ಆಕೆಯ ಸಹಚರ ಮಾರ್ಟಿಮರನೂ ರಾಜ್ಯವಾಳುತ್ತಿದ್ದರು. ಎಡ್ವರ್ಡನಿಗೆ ಇದು ಸಹಿಸಲಿಲ್ಲ. ಕೊನೆಗೆ ರಹಸ್ಯವಾಗಿ ಅವರಿದ್ದಲ್ಲಿಗೆ ನುಗ್ಗಿ ಮಾರ್ಟಿಮರನನ್ನು ಕೈಸೆರೆ ಹಿಡಿದ. ತಾಯಿಯನ್ನು ಗೌರವದಿಂದಲೇ ಕಾಣಲಾಯಿತಾದರೂ ಆಕೆಯ ಪ್ರಭಾವ ಮುಗಿದು ಹೋಯಿತು. ಈತನ ಆಳ್ವಿಕೆಯಲ್ಲಿ ಇಂಗ್ಲೆಂಡ್-ಫ್ರಾನ್ಸ್‍ಗಳ ನಡುವೆ ನೂರುವರ್ಷಗಳ ಯುದ್ಧ ಆರಂಭವಾಯಿತು. ಬಹಳ ಜನರನ್ನು ಆಹುತಿ ತೆಗೆದುಕೊಂಡು ಕರಾಳ ಮೃತ್ಯುವೆಂದು ಹೆಸರಾದ ಪ್ಲೇಗ್ ವ್ಯಾಧಿ ಇಂಗ್ಲೆಂಡಿನಲ್ಲಿ ಕಾಣಿಸಿಕೊಂಡದ್ದು ಇವನ ಕಾಲದಲ್ಲೇ. ಇದರಿಂದ ದುಡಿಮೆಗಾರರ ಸಂಖ್ಯೆ ಕಡಿಮೆಯಾಯಿತು. ಕಾರ್ಮಿಕರು ಹೆಚ್ಚು ಕೂಲಿ ಬಯಸಿದರು. ದೇಶದಲ್ಲಿ ಸಾಮಾಜಿಕ-ಆರ್ಥಿಕ ಪರಿವರ್ತನೆಗಳಾದವು.

ಎಡ್ವರ್ಡ್ IV :	1442-1483. ಇಂಗ್ಲೆಂಡಿನ ಯಾರ್ಕಿನ ಡ್ಯೂಕನಾಗಿದ್ದ ರಿಚರ್ಡನ ಮಗ. ಇಂಗ್ಲೆಂಡಿನ ದೊರೆಯಾಗಿದ್ದ ಆರನೆಯ ಹೆನ್ರಿಯನ್ನು ಸೋಲಿಸಿ 1461ರಲ್ಲಿ ದೊರೆಯಾದ. ಎಡ್ವರ್ಡನ ದಾಯಾದಿ ವಾರ್ವಿಕ್ ಫ್ರಾನ್ಸಿಗೆ ಓಡಿಹೋಗಿ ಆರನೆಯ ಹೆನ್ರಿಯ ಹೆಂಡತಿಯೊಂದಿಗೆ ಮರಳಿ ಇಂಗ್ಲೆಂಡಿಗೆ ದಂಡೆತ್ತಿ ಬಂದು ಎಡ್ವರ್ಡನನ್ನು ಸೋಲಿಸಿ ಆರನೆಯ ಹೆನ್ರಿಯನ್ನು ಸಿಂಹಾಸನದ ಮೇಲೆ ಕೂರಿಸಿದ. ಆದರೆ ಕೊನೆಗೂ ಅವರು ಎಡ್ವರ್ಡನಿಂದ ಸಂಪೂರ್ಣ ಸೋತರು. 1471ರಲ್ಲಿ ಹೆನ್ರಿ ಲಂಡನ್ನಿನ ಗೋಪುರದಲ್ಲಿ ಸಾವಿಗೀಡಾದಾಗ ಎಡ್ವರ್ಡನ ಆಳ್ವಿಕೆ ಸುಸೂತ್ರವಾಯಿತು. ಆದರೆ ಈತ ತನ್ನ 41ನೆಯ ವರ್ಷದಲ್ಲೇ ಸತ್ತ. ಅತಿಯಾದ ಭೋಗಜೀವನವೇ ಆತನ ಮೃತ್ಯುವಿಗೆ ಕಾರಣವಿದ್ದರೂ ಇರಬಹುದೆಂದು ಊಹಿಸಲಾಗಿದೆ.		  (ಎಂ.ವಿ.ಎಸ್.ಆರ್.)

ಎಡ್ವರ್ಡ್ V :	1470-1483. ಇಂಗ್ಲೆಂಡಿನ ಹುಡುಗ ದೊರೆ. ನಾಲ್ಕನೆಯ ಎಡ್ವರ್ಡನ ಬದುಕಿದ್ದ ಮಕ್ಕಳ ಪೈಕಿ ಹಿರಿಯ. 1483ರ ಏಪ್ರಿಲಿನಲ್ಲಿ ಪಟ್ಟಕ್ಕೆ ಬಂದ. ಅದೇ ವರ್ಷದ ಜೂನಿನಲ್ಲಿ ಈತನ ಆಳ್ವಿಕೆ ಮುಗಿಯಿತು. ಇಂಗ್ಲೆಂಡಿನ ಸಿಂಹಾಸನಕ್ಕಾಗಿ ಬಡಿದಾಡುತ್ತಿದ್ದವರಿಗೆ ಈ ಹುಡುಗ ಆಹುತಿಯಾದ. ಇವನ ಚಿಕ್ಕಪ್ಪಂದಿರಾದ ರಿಚರ್ಡ್ (ಗೌಸ್ಟರಿನ ಡ್ಯೂಕ್) ಮತ್ತು ಅರ್ಲ್ ರಿವರ್ಸ್ ರಾಜ್ಯಕ್ಕಾಗಿ ಆಸೆಪಟ್ಟರು. ಗೌಸ್ಟರ್ ಇವನನ್ನೂ ಇವನ ತಮ್ಮನನ್ನೂ ಲಂಡನ್ ಗೋಪುರದಲ್ಲಿ ಬಂಧಿಸಿಟ್ಟು ಅವರು ಅನೈತಿಕ ಪುತ್ರರೆಂದು ಸಾಧಿಸಿ, ಕೊನೆಗೆ ತಾನೇ ಮೂರನೆಯ ರಿಚರ್ಡ್ ಎಂಬ ವಿಧಾನದಲ್ಲಿ ಸಿಂಹಾಸನವನ್ನೇರಿದ. ಎಡ್ವರ್ಡನೂ ಇವನ ಸೋದರನೂ ನಿದ್ರಿಸುತ್ತಿದ್ದಾಗ ಉಸಿರು ಕಟ್ಟಿಸಿ ಗೌಸ್ಟರ್ ಇವರನ್ನು ಕೊಲ್ಲಿಸಿದನೆಂದು 20 ವರ್ಷಗಳ ನಂತರ ಸರ್ ಥಾಮಸ್ ಮೋರ ತೀರ್ಪು ನುಡಿದಿದ್ದಾನೆ. ಷೇಕ್ಸ್‍ಪಿಯರ್ ಮಹಾಕವಿಯ ರಿಚರ್ಡ್ III ಎಂಬ ನಾಟಕದಲ್ಲಿ ಇವರ ಬಾಳಿನ ದುರಂತ ಚಿತ್ರಿತವಾಗಿದೆ.	

ಎಡ್ವರ್ಡ್ VI :	1597-1553. ಇಂಗ್ಲೆಂಡ್-ಐರ್ಲೆಂಡ್ ದೊರೆಯಾಗಿದ್ದ. 1547ರಲ್ಲಿ ಸಿಂಹಾಸನವೇರಿದ. ಎಂಟನೆಯ ಹೆನ್ರಿಯ ಒಬ್ಬನೇ ಮಗ. ತಾಯಿ ಜೇನ್ ಸೇಮೂರ್ (ಹೆನ್ರಿಯ ಮೂರನೆಯ ಹೆಂಡತಿ) ಎಡ್ವರ್ಡ್ ಹುಟ್ಟಿದ 12ನೆಯ ದಿನ ತೀರಿಕೊಂಡಳು. ಎಡ್ವರ್ಡ್ ದೃಢಕಾಯನಾಗಿರಲಿಲ್ಲ. ಆದರೂ ಈತನ ವಿದ್ಯಾಭ್ಯಾಸ ಬಲು ಕಟ್ಟುನಿಟ್ಟಾಗಿ ನಡೆಯಿತು. ಈತ ಲ್ಯಾಟಿನ್, ಗ್ರೀಕ್, ಫ್ರೆಂಚ್ ಭಾಷೆ ಕಲಿತ.

	ಪಟ್ಟಕ್ಕೆ ಬಂದಾಗ ಈತನಿಗೆ ಕೇವಲ ಒಂಬತ್ತು ವರ್ಷ. ಸಾಮರ್ಸೆಟ್ ಇವನ ರಕ್ಷಕನಾಗಿದ್ದ. ಮುಂದೆ ಈತನನ್ನು ಹಿಡಿತದಲ್ಲಿಟ್ಟುಕೊಳ್ಳಲು ಅನೇಕರು ಸ್ಪರ್ಧಿಸಿದರು. ಸಾರ್ಮರ್ಸೆಟನ ತಮ್ಮ ಇವನಿಗೆ ಹಣದ ಆಸೆ ತೋರಿಸಿದ. ವಾರ್ವಿಕಿನ ಅರ್ಲ್ ಆಗಿದ್ದ ಜಾನ್ ಡಡ್ಲಿ ಇವನ ಮನಸ್ಸಿನ ಮೇಲೆ ಪ್ರಭಾವ ಬೀರಿದ. ಸಾಮರ್ಸೆಟ್‍ನ ಅಧಿಕಾರ ಹೋಯಿತು. ಎಡ್ವರ್ಡನಿಗೆ ಆಡಳಿತದ ಪೂರ್ಣಾಧಿಕಾರವಿದೆಯೆಂದು ಘೋಷಿಸಲಾಯಿತು. ಡಡ್ಲಿಯೇ ದೊರೆಯ ಹೆಸರಿನಲ್ಲಿ ಅಧಿಕಾರ ಚಲಾಯಿಸುತ್ತಿದ್ದ.

	ಆದರೆ ಎಡ್ವರ್ಡ್ ಬಹುಕಾಲ ಬದುಕಲಿಲ್ಲ. ಇಪ್ಪತ್ತಾರನೆಯ ವಯಸ್ಸಿನಲ್ಲಿ ಆತ ಕ್ಷಯರೋಗಕ್ಕೆ ತುತ್ತಾದ. ಸಾಯುವ ಮುನ್ನ ಈತ ಬರೆದ ಉಯಿಲಿನಲ್ಲಿ ತನ್ನ ತಾಯಿ ಜೇನಳಿಗೆ (ಎರಡನೆಯ ಸಂಬಂಧದಲ್ಲಿ) ಹುಟ್ಟಿದ ಗಂಡು ಸಂತಾನಕ್ಕೆ ರಾಜ್ಯ ಸಲ್ಲಬೇಕೆಂದು ಬರೆದಿದ್ದನಾದರೂ ಡಡ್ಲಿಯ ಸಂಚಿನಿಂದ ಈ ಉಯಿಲಿಗೆ ಬೇರೆ ಅರ್ಥ ಬರುವಂತೆ ಇದನ್ನು ತಿದ್ದಲಾಯಿತು. ಜೇನಳಿಗೆ ಅಥವಾ ಆಕೆಯ ಗಂಡು ಸಂತಾನಕ್ಕೆ ಎಂಬುದಾಗಿ ವ್ಯಾಖ್ಯಾನಿಸಲಾಯಿತು.

	ಅಲ್ಪಾಯು ಎಡ್ವರ್ಡಲ್ಲಿ ಮಹಾ ಛಲಗಾರನಾಗುವ ಲಕ್ಷಣವಿತ್ತು. ಆ ಕಾಲದ ದುಷ್ಟ ಪ್ರವೃತ್ತಿಗಳನ್ನೆಲ್ಲ ಈತ ಅರಿತಿದ್ದ. ಎಡ್ವರ್ಡ್ ಹೆಚ್ಚು ಕಾಲ ಬದುಕಿದ್ದಿದ್ದರೆ ಇಂಗ್ಲೆಂಡಿನ ಇತಿಹಾಸವೇ ಬಹುಶಃ ಬೇರೆ ರೀತಿ ಇರುತ್ತಿತ್ತು. ದೊರೆಯ ದೈವೀ ಶಕ್ತಿಯಲ್ಲೂ ಪ್ರಾಟೆಸ್ಟಂಟ್‍ಮತದ ದೈವೀಸತ್ಯದಲ್ಲೂ ಈತನಿಗೆ ಅಗಾಧ ನಂಬಿಕೆ.

ಎಡ್ವರ್ಡ್ VII :	1841-1910, ಇಂಗ್ಲೆಂಡಿನ ದೊರೆ (1901-10). ವಿಕ್ಟೋರಿಯ ರಾಣಿಯ ಜ್ಯೇಷ್ಠಪುತ್ರ. ಐದನೆಯ ಜಾರ್ಜ್ ಇವನ ಮಗ. 60 ವರ್ಷಕಾಲ ಈತ ವೇಲ್ಸಿನ ರಾಜಕುಮಾರನಾಗಿದ್ದ. ಬ್ರಿಟಿಷ್ ಚಕ್ರಾಧಿಪತ್ಯದ ಉಚ್ಛ್ರಾಯಕಾಲದಲ್ಲಿ ಬದುಕಿದ್ದದ್ದು ಇವನ ಅದೃಷ್ಟ. ಒಂದನೆಯ ಮಹಾಯುದ್ಧ ಆರಂಭವಾಗುವ ವೇಳೆಗೆ ಈತ ತೀರಿಕೊಂಡ. ಬ್ರಿಟನ್ನಿನ ಲಾಡ್ರ್ಸ್ ಸಭೆಯ ತಡೆ (ವೀಟೊ) ಅಧಿಕಾರವನ್ನು ಮೊಟಕು ಮಾಡಲು ಹರ್ಬರ್ಟ್ ಆಸ್ಕ್ವಿತ್ ಮಾಡಿದ ಪ್ರಯತ್ನಕ್ಕೆ ಇಷ್ಟವಿಲ್ಲದಿದ್ದರೂ ಈತ ಬೆಂಬಲನೀಡಬೇಕಾಯಿತು. ಯೂರೋಪ್ ಪ್ರವಾಸ ಮಾಡಿ, ಫ್ರಾನ್ಸಿನೊಡನೆ ಸ್ನೇಹ ಬೆಳೆಸಿ, ಇತರ ದೇಶಗಳೊಂದಿಗೆ ಕೌಲು ಮಾಡಿಕೊಂಡು ಬ್ರಿಟನ್ನಿನ ಅಂತರರಾಷ್ಟ್ರೀಯ ಸೌಹಾರ್ದ ಬೆಳೆಸಲು ಈತನೂ ಕಾರಣ.

	ಎಡ್ವರ್ಡ್ ಷೋಕಿಯ ದೊರೆ. ಆಕರ್ಷಕ ಗಡ್ಡ, ನೀಟಾದ ಬೂಟು, ಎತ್ತರದ ಹ್ಯಾಟು, ಠೀಕು ಠಾಕು - ಇವು ಈತನ ಬಾಹ್ಯಲಕ್ಷಣ. ಬ್ರಿಟಿಷ್ ರಾಜಮನೆತನಕ್ಕೆ ಗಾಂಭೀರ್ಯದ ಗೌರವ ದೊರಕಿಸಿಕೊಡುವ ಎಲ್ಲ ಸಮಾರಂಭಗಳಲ್ಲೂ ಈತ ಹಾಜರಾಗುತ್ತಿದ್ದ.

	ಆದರೆ ಈತನ ಆಳ್ವಿಕೆಯ ಕೊನೆಗಾಲದ ವೇಳೆಗೆ ವಿಶ್ವದ ಪರಿಸ್ಥಿತಿ ಹದಗೆಟ್ಟಿತ್ತು. ಸೂರ್ಯ ಮುಳುಗದ ಸಾಮ್ರಾಜ್ಯದಲ್ಲೂ ಅಲ್ಲಲ್ಲಿ ಬಿರುಕುಗಳು ಬಾಯ್ದೆರೆಯುತ್ತಿದ್ದವು. ಇವುಗಳಿಂದಾಗಿ ಮಾನಸಿಕ ಗೊಂದಲಕ್ಕೆ ಈಡಾಗಿದ್ದ ಎಡ್ವರ್ಡ್ ದೊರೆ ಸಿಂಹಾಸನತ್ಯಾಗ ಮಾಡುವುದಾಗಿ ಪದೇ ಪದೇ ಹೇಳುತ್ತಿದ್ದ. ಆದರೆ ಸಿಂಹಾಸನತ್ಯಾಗ ಮಾಡಿದವನು ಇವನಲ್ಲ, ಈತನ ಮೊಮ್ಮಗ; ಅದೂ ಬೇರೆಯ ಕಾರಣಕ್ಕಾಗಿ.

	ಎಡ್ವರ್ಡ್ ಭಾರತದ ಚಕ್ರವರ್ತಿಯೂ ಆಗಿದ್ದ. ಈತ ಸಿಂಹಾಸನವೇರಿದಾಗ ಭಾರತದ ವೈಸರಾಯಿಯಾಗಿದ್ದ ಲಾರ್ಡ್ ಕರ್ಜನ್ ದೆಹಲಿಯಲ್ಲಿ ಒಂದು ದರ್ಬಾರು ಏರ್ಪಡಿಸಿ ಈ ವಾರ್ತೆಯನ್ನು ಘೋಷಿಸಿದ. ಭಾರತ ಸರ್ಕಾರವನ್ನು ಬ್ರಿಟಿಷ್ ರಾಜತ್ವ ವಹಿಸಿಕೊಂಡು ಐವತ್ತು ವರ್ಷಗಳಾದಾಗ (1908) ಆಚರಿಸಿದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಭಾರತದ ಪ್ರಜೆಗಳಿಗೂ ಮಹಾರಾಜರಿಗೂ ಈ ದೊರೆಯ ಒಂದು ಘೋಷಣೆ ಹೊರಡಿಸಲಾಗಿತ್ತು. ಅದರಲ್ಲಿ ಐವತ್ತುವರ್ಷಗಳ ಆಡಳಿತದ ಸ್ವಪ್ರಶಂಸೆಯಿತ್ತಲ್ಲದೆ ಇಲ್ಲಿನ ಜನಕ್ಕೆ ಆಡಳಿತದಲ್ಲಿ ಹೆಚ್ಚು ಹೆಚ್ಚು ಪ್ರಾತಿನಿಧ್ಯ ದೊರಕಿಸಿಕೊಡುವ ಭರವಸೆಯೂ ಇತ್ತು. ಮುಂದೆ ಬರಲಿದ್ದ ಮಾರ್ಲೆ-ಮಿಂಟೋ ಸುಧಾರಣೆಗಳಿಗೆ ನಾಂದಿಯಾಗಿ 1909ರಲ್ಲಿ ಇಂಡಿಯ ಕೌನ್ಸಿಲುಗಳ ಕಾಯಿದೆ ಜಾರಿಗೆ ಬಂದಾಗ ದೊರೆ ಎಡ್ವರ್ಡನಿಗೆ ಈ ಸುಧಾರಣೆಗಳು ಅಷ್ಟೇನೂ ಹಿಡಿಸಲಿಲ್ಲ. ಆದರೆ ಮಂತ್ರಿಗಳ ಜವಾಬ್ದಾರಿಯ ನೀತಿಗೆ ಸಮ್ಮತಿಸುವಂಥ ವಿವೇಕ ಇವನಿಗಿತ್ತು.

ಎಡ್ವರ್ಡ್ VIII :	1936ರ ಜನವರಿ 20ರಂದು ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ದೊರೆಯಾಗಿ ಪಟ್ಟಾಭಿಷಿಕ್ತನಾಗಿ ಅದೇ ವರ್ಷದ ಡಿಸೆಂಬರ್ 11ರಂದು ರಾಜ್ಯತ್ಯಾಗಮಾಡಿದ. ಈತ ಐದನೆಯ ಜಾರ್ಜನ ಮಗ (ಜನನ : 1894) ಎಡ್ವರ್ಡ್ ಆಲ್ಬರ್ಟ್ ಕ್ರಿಶ್ಚಿಯನ್ ಜಾರ್ಜ್ ಆಂಡ್ರ್ಯೂ ಪ್ಯಾಟ್ರಿಕ್ ಡೇವಿಡ್ ಈತನ ಪೂರ್ಣನಾಮ.

	ಎಂಟನೆಯ ಎಡ್ವರ್ಡ್ ಹುಟ್ಟಿದಾಗ ಏಳನೆಯ ಎಡ್ವರ್ಡ್ ಇನ್ನೂ ಬದುಕಿದ್ದ. ರಾಯಲ್ ನೌಕಾ ಶಿಕ್ಷಣಾಲಯದಲ್ಲಿ ಶಿಕ್ಷಣ ಪಡೆದ ಈತ 1911ರಲ್ಲಿ ವೇಲ್ಸ್ ರಾಜಕುಮಾರನಾದ. 1912ರಲ್ಲಿ ಆಕ್ಸ್‍ಫರ್ಡಿನಲ್ಲಿ ಸಾಮಾನ್ಯರ ಜೊತೆಯಲ್ಲಿ ಇವನಿಗೆ ಶಿಕ್ಷಣ ದೊರೆಯಿತು. ಆಗಿಂದಾಗ್ಗೆ ಈತ ರಾಜವೈಭವದ ಸಮಾರಂಭಗಳಲ್ಲಿ ಭಾಗವಹಿಸಬೇಕಾಗುತ್ತಿತ್ತು. ಆದರೆ ಮೊದಲಿಂದಲೂ ಇವುಗಳಲ್ಲಿ ಎಡ್ವರ್ಡನಿಗೆ ನಿರಾಸಕ್ತಿ. ಇವು ಕಾಲ, ಹಣ ಮತ್ತು ಶಕ್ತಿಗಳ ದುವ್ರ್ಯಯವೆಂದು ಈತನೇ ತನ್ನ ದಿನಚರಿಯಲ್ಲಿ ಒಂದೆಡೆ ಬರೆದುಕೊಂಡಿದ್ದಾನೆ.

	ಒಂದನೆಯ ಮಹಾಯುದ್ಧದಲ್ಲಿ ಈತನೂ ಸೇನೆಗೆ ದಾಖಲಾಗಿದ್ದ. ಆದರೆ ಇವನನ್ನು ಯುದ್ಧದ ಮುಂಚೂಣಿಗೆ ಕಳಿಸಲಿಲ್ಲ. ಈತ ಕೈಸೆರೆಯಾಗುವ ಸಂಭವಕ್ಕೆ ಎಡೆಕೊಡಬಾರದೆಂದು ವಿದೇಶಾಂಗ ಸಚಿವರ ಆತಂಕ. ತನಗೆ ಈ ಅವಕಾಶ ತಪ್ಪಿತೆಂದು ಎಡ್ವರ್ಡನ ದುಃಖ.

	ಯುದ್ಧಾನಂತರದಲ್ಲಿ ಈತ ವಿಶ್ವಪರ್ಯಟನೆ ಮಾಡಿದ್ದಲ್ಲದೆ ದೊರೆತನಕ್ಕೆ ಅವಶ್ಯವಾದ ಎಲ್ಲ ಬಗೆಯಲ್ಲೂ ಸಜ್ಜುಗೊಂಡ.

	1936ರಲ್ಲಿ ಐದನೆಯ ಜಾರ್ಜ್ ಸತ್ತಾಗ ಈತ ಎಂಟನೆಯ ಎಡ್ವರ್ಡ್ ದೊರೆಯೆಂದು ಸಾರಲಾಯಿತು. ದೊರೆ ಎಡ್ವರ್ಡ್‍ನ ಪ್ರಥಮ ಭಾಷಣದ ಶ್ರೀಮದ್ಗಾಂಭೀರ್ಯದ ನಡುವೆ ಈತನ ವ್ಯಕ್ತಿತ್ವದ ಚಿತ್ರವೊಂದು ಇಣಿಕು ಹಾಕಿತ್ತು. ತಾನು ದೊರೆಯಾಗಿ ಮಾತಾಡುತ್ತಿದ್ದರೂ ತನ್ನ ಹಳೆಯ ವ್ಯಕ್ತಿತ್ವ ಬದಲಾಗಿಲ್ಲವೆಂದು ಅದರಲ್ಲಿ ಹೇಳಿಕೊಂಡ.

	ಈ ವ್ಯಕ್ತಿತ್ವ ಬಲು ಬೇಗ ಎಡ್ವರ್ಡನ ಇಡೀ ದೇಹವನ್ನೇ ಆಕ್ರಮಿಸಿಕೊಂಡು ದೊರೆತನವನ್ನೇ ಮಸಕುಮಾಡಿತು. ಈತ ವಿಹಾರಾರ್ಥವಾಗಿ ಪ್ರವಾಸ ಕೈಕೊಂಡಿದ್ದಾಗ ದೊರೆಯ ಪರಿವಾರದಲ್ಲಿ ಶ್ರೀಮತಿ ವಾಲಿಸ್ ವಾರ್‍ಫೀಲ್ಡ್ ಸಿಂಪ್ಸನ್ ಎಂಬ ಮಹಿಳೆಯೊಬ್ಬಳಿದ್ದಳು. ಎಡ್ವರ್ಡ್ ಆಕೆಯಿಂದ ಆಕರ್ಷಿತನಾದ. ಇವರಿಬ್ಬರ ಕಲಾಪಗಳ ಬಗ್ಗೆ ಪತ್ರಿಕೆಗಳಲ್ಲಿ ಹುಯಿಲೆದ್ದಿತು.

	ಶ್ರೀಮತಿ ಸಿಂಪ್ಸನ್ ತನ್ನ ಗಂಡನಿಂದ ವಿವಾಹವಿಚ್ಛೇದನ ಪಡೆಯುವಳೆಂಬ ಸುದ್ದಿಯೂ ಪ್ರಕಟವಾಯಿತು. ದೊರೆಯ ನಡೆವಳಿಕೆಯಿಂದ ಪ್ರಧಾನಿ ಬಾಲ್ಡ್‍ವಿನ್ ಆತಂಕಗೊಂಡ. ಆದರೆ ಎಡ್ವರ್ಡನ ಮನಸ್ಸು ಕದಲಲಿಲ್ಲ. ಆಕೆಯನ್ನು ಮದುವೆಯಾಗಿಯೂ ದೊರೆಯಾಗಿರುವುದು ಸಾಧ್ಯವಿಲ್ಲದಿದ್ದರೆ ದೊರೆತನವನ್ನೇ ಬಿಡಲು ಸಿದ್ಧವೆಂಬುದಾಗಿ ಹೇಳಿದ. ಮುಂದಿನ ಕೆಲವು ವಾರ ಬ್ರಿಟನ್ನಿನಲ್ಲಿ ವಿಪುಲವಾಗಿ ವಾದ-ವಿವಾದಗಳು ನಡೆದುವು. ಪ್ರೇಮ-ರಾಜತ್ವಗಳೆರಡನ್ನೂ ಉಳಿಸುವ ಸಲುವಾಗಿ ನಾನಾ ನಡುಮಾರ್ಗಗಳು ಸೂಚಿತವಾದುವು. ಯಾವುವೂ ಫಲಿಸಲಿಲ್ಲ. ಕೊನೆಗೆ ತಾನು ಸಿಂಹಾಸನತ್ಯಾಗ ಮಾಡುವುದಾಗಿ ಎಡ್ವರ್ಡ್ ಘೋಷಿಸಿದ. ಪಾರ್ಲಿಮೆಂಟು ಒಪ್ಪಿಗೆ ಸೂಚಿಸಿತು. "ಪ್ಯೂರಿ" ಯುದ್ಧ ನೌಕೆಯಲ್ಲಿ ಕುಳಿತು ಎಡ್ವರ್ಡ್ ಬ್ರಿಟನ್ ಬಿಟ್ಟು ಹೊರಟ. ಈತನ ಸ್ಥಾನದಲ್ಲಿ ಸಿಂಹಾಸನಕ್ಕೆ ಬಂದ ಆರನೆಯ ಜಾರ್ಜ್ ಈತನಿಗೆ ವಿಂಡ್ಸರಿನ ಡ್ಯೂಕ್ ಪದವಿ ಪ್ರದಾನ ಮಾಡಿದ. ಮುಂದಿನ ವರ್ಷದ ಜೂನ್ 3ರಂದು ಸಿಂಪ್ಸನ್-ಎಡ್ವರ್ಡ್ ವಿವಾಹ ಜರುಗಿತು. ಈತ ಎ ಕಿಂಗ್ಸ್ ಸ್ಟೋರಿ ಎಂಬ ಪುಸ್ತಕದಲ್ಲಿ ತನ್ನ ಅನುಭವಗಳನ್ನು ಕುರಿತು ಬರೆದಿದ್ದಾನೆ. 

	ಎಂಟನೆಯ ಎಡ್ವರ್ಡ್ ವೇಲ್ಸಿನ ರಾಜಕುಮಾರನಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದ (1921). ಆದರೆ 1919ರ ಭಾರತದ ಸರ್ಕಾರ ಕಾಯಿದೆಯಿಂದ ಅತೃಪ್ತರಾಗಿದ್ದ ಭಾರತೀಯರು ಮಹಾತ್ಮಾಗಾಂಧಿಯವರ ನೇತೃತ್ವದಲ್ಲಿ ಚಳವಳಿ ಹೂಡಿ ಹರತಾಳ ಆಚರಿಸುತ್ತಿದ್ದರು. ನಿರ್ಜನವಾದ ಬೀದಿಗಳಲ್ಲಿ ಎಡ್ವರ್ಡನ ಮೆರವಣಿಗೆ ನಡೆಯಿತು.					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ